ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ಗ್ರಾಮ ಲೆಕ್ಕಿಗರು ಖುದ್ದು ಭೇಟಿ ನೀಡಿ, ಅರ್ಜಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಡಿಗೇರಾ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಭಾಗವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಧಿಕಾರಿಗಳ ಸಭೆ ನಡೆಸಿ ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಅವರು ಮಾತನಾಡಿದರು.
ಸಾಮಾಜಿಕ ಯೋಜನೆಗಳಾದ ವಯಸ್ಸಾದ ಪಿಂಚಣಿ, ವಿಧವೆ ಪಿಂಚಣಿ, ದೈಹಿಕವಾಗಿ ಅಂಗವಿಕಲರ ಪಿಂಚಣಿ, ಸಂಧ್ಯಾ ಸುರಕ್ಷತೆ ವಿವಿಧ ಯೋಜನೆಗಳ ಪಿಂಚಣಿಯನ್ನೇ ಅವಲಂಬಿಸಿರುವ ಇಂತಹ ಫಲಾನುಭವಿಗಳಿಗೆ ಆದಷ್ಟು ಬೇಗನೆ ಸೌಲಭ್ಯ ಒದಗಿಸಲು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಬ್ಯಾಂಕ್ ಗಳ ಕಡೆಯಿಂದ ಸಮಸ್ಯೆಯಿದ್ದರೆ ಪರಿಶೀಲಿಸಿ ಫಲಾನುಭವಿಗಳ ಖಾತೆಗೆ ಪಿಂಚಣಿ ಹಣ ನೇರವಾಗಿ ಜಮಾ ಆಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಪ್ರತಿ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ಇರುವಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದ್ದು, ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸರ್ಕಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು. ಸರ್ಕಾರದ ಆಸ್ತಿಯನ್ನು ಉಳಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಒತ್ತುವರಿ ಜಮೀನನ್ನು ಗುರುತಿಸಿ ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದರು..
ಈ ಸಂದರ್ಭದಲ್ಲಿ ವಡಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿ ಬಸವರಾಜ ಎಮ್ ಸಜ್ಜನ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಉಪ ತಹಶೀಲ್ದಾರ ಸಿದ್ದಯ್ಯಸ್ವಾಮಿ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.