ಬೆಂಗಳೂರು: ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಹಲವೊಂದು ಪ್ರಸಂಗಗಳು ನಡೆಯುತ್ತಿದೆ. ಕೋಲಾರದ ಜೆಡಿಎಸ್ ನಾಯಕ ಶ್ರೀನಿವಾಸ ಗೌಡ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಕೋಲಾರ ಶಾಸಕರ ನಡೆಗೆ ಜೆಡಿಎಸ್ ನಾಯಕರು ಕಿಡಿಕಾರಿದ್ದು, “ಆ ಮನುಷ್ಯನಿಗೆ ಮಾನಮರ್ಯಾದೆ ಇದೆಯೇ” ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮಾನಮರ್ಯಾದೆ ಇದ್ದರೆ ರಾಜಕಾರಣ ಮಾಡಲಿ. ಇಂತಹ ಕೆಲಸ ಮಾಡಬಾರದು. ಇದು ಜೆಡಿಎಸ್ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದರು. ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಮಾಡುವುದನ್ನು ಇವರು ಮಾಡುತ್ತಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲು ಹೋಗಿದ್ದಾರೆ. ಈ ಅಡ್ಡಮತದಾನದಿಂದ ಕಾಂಗ್ರೆಸ್ ನವರಿಗೆ ಗೆಲ್ಲಲು ಆಗುವುದಿಲ್ಲ. ನಾಡಿನ ಜನತೆ ನೋಡುತ್ತಿದ್ದಾರೆ. ಇವರು ಯಾವ ಮುಖ ಇಟ್ಟು ಬಿಜೆಪಿ ಬಗ್ಗೆ ಮಾತನಾಡುತ್ತಾರೆ? ಬಿಜೆಪಿ ಗೆಲ್ಲಿಸಲು ಯಾಕೆ ಹೀಗೆ ಮಾಡುತ್ತೀರಿ? ನಿಮ್ಮನ್ನು ಮತ್ತು ಬಿಜೆಪಿಯನ್ನು ಎದುರಿಸುವ ಶಕ್ತಿ ನಮಗಿದೆ ಎಂದು ಗುಡುಗಿದರು.